ಅಸುರ
1 ಬಹುವಚನದಲ್ಲಿ ರಾಕ್ಷಸರು. ಬ್ರಹ್ಮನ ಸೊಂಟದ ಪ್ರದೇಶದಿಂದ ಜನಿಸಿದ ಇವರು ಆತನೊಡನೆಯೇ ಕ್ರೀಡಿಸಲು ಹೋದಾಗ ಅವನು ತಾಳಲಾರದೆ ವಿಷ್ಣುವನ್ನು ಮೊರೆಹೊಕ್ಕು ಸಲಹೆ ಪಡೆದು, ಅದರಂತೆ ದೇಹತ್ಯಾಗ ಮಾಡುತ್ತಾನೆ. ದಿವ್ಯಸೌಂದರ್ಯವತಿಯಾದ ಹೆಣ್ಣೊಂದು ಆ ದೇಹದಿಂದ ಉದ್ಭವಿಸಿದಾಗ ಅಸುರರು ಅವಳನ್ನು ಪಡೆದು ತೆರಳುತ್ತಾರೆ, ಭೂಮಿಯಲ್ಲಿ ರಾಜರಾಗಿ ಹುಟ್ಟುತ್ತಾರೆ. 

2. ಏಕವಚನದಲ್ಲಿ ಒಬ್ಬ ಅನಾರ್ಯ. ಪುರಾತನ ಭಾರತೀಯರು ಹೀಗೆ ಕರೆಯಲ್ಪಡುತ್ತಿದ್ದರು. ಅಹುರ ಎಂಬ ಪದ ಜೊರೋಷ್ಟ್ರಿಯನ್ನರಲ್ಲಿ ಪವಿತ್ರಾತ್ಮ ಎಂದು ಕರೆಸಿಕೊಳ್ಳುತ್ತಿದ್ದಂತೆ ಋಗ್ವೇದದ ಅತ್ಯಂತ ಪುರಾತನ ಭಾಗದಲ್ಲಿ ಅಸುರ ಎಂಬ ಪದವೂ ಕರೆಸಿಕೊಳ್ಳುತ್ತಿತ್ತು. ವರುಣ, ಮಿತ್ರ, ಇಂದ್ರ ಮತ್ತು ಇತರ ಪ್ರಮುಖ ದೇವತೆಗಳು ಈ ಹೆಸರಿನಿಂದ ಕರೆಯಲ್ಪಡುತ್ತಿದ್ದ ಕಾಲವೊಂದಿತ್ತು. ಋಗ್ವೇದದ ಅನಂತರದ ಭಾಗಗಳಲ್ಲಿ ಮತ್ತು ಆರ್ಯರಿಗೆ ವಿರುದ್ಧವಾದ ಅಥರ್ವ ವೇದದಲ್ಲಿಯೂ ಕೂಡ ಈ ಪದ ಶುದ್ಧ ವಿರುದ್ಧಾರ್ಥವನ್ನು ಪಡೆದಿದೆ. ಟೈಟಾನ್ ಎಂಬ ಗ್ರೀಕ್ ಪುರಾಣದ ದೈತ್ಯ ದೇವತೆಗಳಿಗೆ ವೈರಿಯಾಗಿದ್ದುಕೊಂಡು ಅವರ ತ್ಯಾಗಗಳ ಕಾರಣದಿಂದ ಯಾವಾಗಲೂ ಅವರಿಗೆ ತೊಂದರೆ ಕೊಡುತ್ತಿದ್ದುದರ ಸೂಚ್ಯಾರ್ಥವನ್ನೂ ಈ ಪದ ಹೊಂದಿದೆ. ಅಸುರರು ಲೋಹಗೆಲಸಗಳಲ್ಲಿ ಪರಿಣತಿಹೊಂದಿದ್ದರು. ಇವರು ಮಂತ್ರಶಕ್ತಿಯನ್ನು ಹೊಂದಿದ್ದವರೆಂದು ಭಾವಿಸಲ್ಪಡುತ್ತಿದ್ದರು.

ಈ ಹೆಸರಿನ ಬಗ್ಗೆ ಅನೇಕ ಅಭಿಪ್ರಾಯಗಳು ಮುಂದಿಡಲ್ಪಟ್ಟಿವೆ. ಅಸ್ಸಿರಿಯನ್ನರ ದೇವರಾದ ಅಶುರ್ ಎಂಬುದರಿಂದ ಈ ಪದ ಬಂದಿರಬೇಕೆಂದು ಕೆಲವರು ಹೇಳುತ್ತಾರೆ. ಭಾರತದಲ್ಲಿ ಆರ್ಯರು ಅಸ್ಸಿಯನ್ನರ ವೈರಿಗಳಾಗಿದ್ದರೆಂದು ತಿಳಿದು ಬರುತ್ತದೆ. ಸುರಾ ಎಂಬ ಮದ್ಯವನ್ನು ಆರ್ಯರು ಹೆಚ್ಚು ಹೆಚ್ಚಾಗಿ ಕುಡಿಯುತ್ತಿದ್ದರೆಂದೂ ಇದನ್ನು ಕುಡಿಯದ ಅನಾರ್ಯರನ್ನು ಅ-ಸುರಾ ಎಂದು ಕರೆದರೆಂದೂ ಮತ್ತೆ ಕೆಲವರು ಹೇಳುತ್ತಾರೆ. ಬ್ರಹ್ಮನ ಉಸಿರಾಡುವಿಕೆ ಅಸು ಎನ್ನಿಸಿಕೊಳ್ಳುತಿದ್ದಿತೆಂದು ನಂಬುವ ಕೆಲವರು ಆ ಅಸುವೇ ಜೀವಿರೂಪ ಪಡೆದು ಅಸುರ ಎಂದಾಗಿದೆ ಎಂದೂ ಹೇಳುತ್ತಾರೆ. ಸುರಾ ಎಂಬ ಪದದ ವಿರುದ್ಧಾರ್ಥವನ್ನೂ ಕೊಡುವುದರಿಂದ ಈ ಪ್ರಯೋಗ ಸ್ವರ್ಗದಲ್ಲಿ ನೆಲೆಸಿರುವ ಕೆಳವರ್ಗದ ದೇವತೆಗಳಿಗೂ ಅನ್ವಯಿಸುತ್ತದೆ. ಆದ್ದರಿಂದ ಈ ಪದ ದೇವರಿಲ್ಲದ ವ್ಯಕ್ತಿ ಎಂದೂ ದೇವರಿಲ್ಲ ಎಂದೂ ಅರ್ಥೈಸುತ್ತದೆ. ಭಾರತದಲ್ಲೆ ನೆಲೆಸಿರುವ ಕೊಲೆರಿಯೆನ್ನರಿಗೆ ಇವರು ಹೋಲುತ್ತಾರೆಂದು ಆಧಾರಪೂರ್ವಕವಾಗಿ ಹೇಳಬಹುದಾದರೆ ಛೋಟಾ ನಾಗಪುರದ ಕೊಲೆರಿಯನ್ ವರ್ಗದವರು ಈಗಲೂ ಅಸುರ್ ಎಂದೇ ಕರೆಯಲ್ಪಡುವುದು ಗಮನಾರ್ಹ.

	ಈ ಪದ ಅನಾರ್ಯರ ಇನ್ನೆರಡು ವರ್ಗಗಳಾದ ದಾನವ ಮತ್ತು ದೈತ್ಯರು ಎಂಬುವುಗಳಿಂದಲೂ ಸೂಚಿತವಾಗುತ್ತದೆ. ಪೌರಾಣಿಕವಾಗಿ ದಾನವರು ಕಶ್ಯಪ ಋಷಿಯ ದೈತ್ಯಶಿಶುಗಳು ಎನ್ನಿಸಿಕೊಳ್ಳುತ್ತಾರೆ. ದೈತ್ಯರು ಎಂಬುವರು ದಿತಿ ಎಂಬ ದೇವತೆಯಲ್ಲಿ ಕಶ್ಯಪ ಋಷಿಯಿಂದ ಜನಿಸಿದವರು. ದೈತ್ಯರೂ ದಾನವರೂ ಸಮುದ್ರದಂಥ ಭಯಂಕರ ರಾಕ್ಷಸರು ಎಂದು ಕೆಲವು ಸಲ ಹೇಳುತ್ತಾರೆ. ಚಂದ್ರಲೋಕದಿಂದ ಬಂದ ಅರ್ವನ್ ಎಂಬ ರಕ್ಕೆಯುಳ್ಳ ಯುದ್ಧಾಶ್ವಗಳು ದೈತ್ಯರವಾಗಿದ್ದುವು.

	ಅಸುರರ ಉಪಕಥೆಗಳಿಂದಲೂ ಅವರು ದೇವತೆಗಳೊಡನೆ ನಡೆಸಿದ ನಿರ್ಬಂಧ ಹೋರಾಟಗಳಿಂದಲೂ ಹಿಂದೂ ಪುರಾಣಗಳು ತುಂಬಿ ಹೋಗಿವೆ. ವೇದಗಳ ಕಾಲದಲ್ಲಿ ಇಂದ್ರನಿಂದಲೂ ಮಹಾಕಾವ್ಯಗಳ ಕಾಲದಲ್ಲಿ ರಾಮ ಮತ್ತು ಕೃಷ್ಣರಿಂದಲೂ ಇವರು ವಿರೋಧಿಸಲ್ಪಡುತ್ತಿದ್ದರು. ಹಿಂದೂ ಪುರಾಣಗಳಲ್ಲಿ ಚಿತ್ರಿಸಿರುವಂತೆ ಅಸುರ ಚರಿತ್ರೆಯಲ್ಲೇ ಸಹಜ ಕ್ರಾಂತಿಯನ್ನುಂಟುಮಾಡಿದಂಥ ಪ್ರಮುಖರು ಇವರು : ಅಂಧಕ, ಜಯ ಮತ್ತು ವಿಜಯ, ಕಾಲನೇಮಿ, ಕೇಶಿ, ಮಧು, ಮಹಿಷ, ಮಾಯ, ನಮುಚಿ, ನಿಕುಂಭ, ಶಂಬರ, ವೈಶ್ವಾನರ, ವೃತ್ರ.						
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ